ತಿಂಮ ರಸಾಯನ

ತಿಂಮ ರಸಾಯನ ಒಂದು ಅಪರೂಪದ ಕೃತಿ. ಈ ಕೃತಿಯನ್ನು ಸ್ವತಃ ಬೀchi ಯವರಿಗಿಂತ ಚೆನ್ನಾಗಿ ಪ್ರಾಯಃಶ ಪರಿಚಯಿಸುವುದು ಕಷ್ಟ ಸಾಧ್ಯ. ಕೆಳಗಿನ ಸಾಲುಗಳನ್ನು ಕೃತಿಯ ಮುನ್ನುಡಿಯಿಂದ ಆರಿಸಲಾಗಿದೆ.

..... ಇದರ ರೂಪು ನಿಘಂಟು, ಜಾತಿ ನಿಘಂಟಲ್ಲ-ನಿಘಂಟು ಮಾಡಬೇಕಾದ ಕೆಲಸ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಅದು ಮಾಡಲಾರದ ಮತ್ತು ಮಾಡಬಾರದ ಕೆಲಸವನ್ನೂ ಇದು ಮಾಡುತ್ತದೆ. ಕತೆ, ಕಾದಂಬರಿ, ನಾಟಕ ಅಥವಾ ಬೇರಿನ್ನೇನಾದರೂ ಆಗಲು ಆಕಾರ ಮಾತ್ರವೇ ಅಲ್ಲ, ಆಚಾರವೂ ಅಡ್ಡಬರುತ್ತದೆ.


ಒಂದೇ ವಿಷಯ ಅಥವಾ ಸಿನ್ನಹಿತ ವಿಷಯಗಳು ಇದರ ಸಾಮಗ್ರಿಯಲ್ಲ, ಆಡು ಮೇದಂತೆ ಕಾದನ್ನೆಲ್ಲ ಬಾಯಾಡಿದೆ. ಕಣಿವೆಯ ಆಳದ ಒಳಗೂ ಇಳಿದಿದೆ. ಬೆಟ್ಟದ ತುಟ್ಟ ತುದಿಯನ್ನು ಮುಟ್ಟಿದೆ. ಆನೆಗೆ ಆಗದ ಕೆಲಸವನ್ನು ಆಡು ಆಡಾಡುತ್ತಾ ಮಾಡುತ್ತದೆ. ತಕ್ಷಣವೇ ಕೊಲ್ಲುವ ವಿಷದ ಎಲೆಯೊಂದಿಗೆ, ಮರುಕ್ಷಣವೇ ಬದುಕಿಸುವ ಸಂಜೀವಿನಿಯೂ ಈ 'ರಸಾಯನ'ದ ಹೊಟ್ಟೆಗೆ ಸೇರಿ ಸರ್ವಸಮಪಾಕವಾಗಿದೆ.


'ಗಾದೆ ಮಾತು' ಎಂಬ ಸಪ್ಪೆ ಸಂಪನ್ನ ಹೆಸರಿನಿಂದ ಕರೆಯಬಹುದಿತ್ತು ಇದನ್ನು. ಆದರೆ ಗಾದೆಗಿಂತಲೂ ತಗಾದೆಯೂ ಹೆಚ್ಚಿದೆ ಇದರಲ್ಲಿ. 'ನುಡಿಕಟ್ಟು' ಎನ್ನಲು ಕಟ್ಟು ಸಂಪೂರ್ಣವಾಗಿ ಸಡಿಲಿದೆ. ಇದರಲ್ಲಿ ಏನೇನಿದೆ ಎಂಬುದನ್ನು ಹೇಳುವುದಕ್ಕಿಂತಲೂ ಏನಿಲ್ಲ ಎಂಬುದನ್ನು ಹೇಳುವುದು ಹೆಚ್ಚು ಸುಲಭವೇನೋ? ಆದರೂ ಕೊಂಚ ಕಷ್ಟದ ಕೆಲಸವೇ ಕೊನೆಗೆ ಹೆಚ್ಚು ಸುಖಕರ. ಹೇರಳವಾಗಿ ಮುಚ್ಚುಮಾತು ಇವೆ. ಇವು ಚುಚ್ಚು ಮಾತೂ ಅಹುದು. ಅಂತೆಯೇ ಬಿಚ್ಚುಮಾತೂ ಇವೆ. ಏಟುಮಾತಿಗೆ ಅಡಚಣೆ ಇಲ್ಲ. ತಿರುಗುಬಾಣಕ್ಕೂ ಕೊರತೆ ಇಲ್ಲ. ಮಾತುಗಳಲ್ಲಿ ತತ್ವವಿದೆ. ತಥ್ಯವಿದೆ. ಹುಡುಗತನವೂ ಇದೆ. ಹಿರಿತನದ ಅನುಭವೋಕ್ತಿ ಇದೆ. ಅಲ್ಲಲ್ಲಿ ಒಗಟು ಮಾತಿದೆ - ಒರಟು ಮಾತೂ ಇದೆ. ಬಾಳಿನ ತಿರುಳನ್ನು ಅಳೆದು ತಪಸ್ವಿಗಳತ್ತ ಕಳಿತ ಫಲವಿದೆ, ಅಪಕ್ವತೆಯ ಒಗರೂ ಇದೆ. ಬರೀ ಹುಳಿಯೂ ಇಲ್ಲದಿಲ್ಲ. ಒಂದೊಂದೆಡೆ ದುಡುಕೂ ಮಾತಿನಲ್ಲಿ ವೇದದ ಸತ್ಯವೂ ಅಡಕವಾಗಿದೆ - ಇನ್ನೊಂದೆಡೆ ತಮಾಷೆಯಾಗಿ ಅಣಕವೂ ಆಗಿದೆ. ವ್ಯಂಗ್ಯದಲ್ಲಿ ಮಾನವ ಧರ್ಮದ ಮತಿತಾರ್ಥ ಬಂದಿದೆ, ಬಾಳಿನ ಗುಟ್ಟು ಬಾಣದಂತೆ ಸಿಡಿದಿದೆ, ನಿತ್ಯದ ಸತ್ಯವು ಕೋಳಿಯಂತೆ ಕೂಗಿದೆ, ಮಲಗಿದವರನ್ನು ಎಬ್ಬಿಸಲು. ಒಟ್ಟಾರೆ ರಸಾಯನವಾಗಿದೆಯೆಂದು ಹೇಳದೆ ಗತ್ಯಂತರವಿಲ್ಲ. ಸಹೃದಯಿಗಳು ನೋಡಿದಂತೆ ಕಾಣುವುದಷ್ಟೆ ಇದರ ಗುರಿ - ಬೇರೊಂದಿಲ್ಲ. .....

- ಬೀchi

ಇಂಥಹ ಅದ್ಭುತ ಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ. ಓದುಗರಲ್ಲಿ ಕೃತಿಯ ಬಗೆಗೆ ಕುತೂಹಲ ಮೂಡಿಸುವ ಸಲುವಾಗಿ ಈ ಕೃತಿಯ ಕೆಲವು ಪದಗಳನ್ನು ಈ ವೆಬ್ ಸೈಟ್ ನಲ್ಲಿ ಬಳಸಲಾಗಿದೆ. ಇದು ಮೂಲ ಕೃತಿಯ ಜನಪ್ರೀಯತೆಯನ್ನು ಹೆಚ್ಚಿಸುವ ಒಂದು ಸಣ್ಣ ಪ್ರಯತ್ನವಾಗಿದೆ.

ಮೂಲ ಕೃತಿಯನ್ನು(paper print) ಕೊಳ್ಳ ಬಯಸುವವರು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ.

ತತ್ಸಮಾನ ಜ್ಞಾನ ಪುಟಗಳು

}